Thursday, May 14, 2020

ತಾಜ್ ಮಹಲ್ : ಪ್ರೀತಿಯೋ? ಉತ್ಪ್ರೇಕ್ಷೆಯೋ?

ಯಮುನಾ ನದಿಯ ತೀರದಲ್ಲಿ ಆ ಸುಂದರ ಕಲಾಕೃತಿಯು ಮುಗಿಲನ್ನೇ ನಾಚುವಂತೆ ಹೊಳೆಯುತ್ತಾ ಅಚಲವಾಗಿ ನಿಂತಿರುವುದನ್ನು ಕಾಣಲು ನನ್ನಂತಹ ಇತಿಹಾಸ ಪ್ರೇಮಿಗಳಿಗೆ ಎರಡು ಕಣ್ಣು ಸಾಲದು. ಇತಿಹಾಸದ ಪುಟಗಳನ್ನು ತಿರುವುತ್ತಾ ಒಮ್ಮೆ ಹಿಂತಿರುಗಿ ನೋಡಿದಾಗ ಅಲ್ಲಿನ ರಕ್ತ-ಸಿಕ್ತ ಬರಹಗಳ ಮಧ್ಯೆ, ಯುದ್ಧ-ಆಕ್ರಮಣಗಳ ಮಧ್ಯೆ ಭಾರತೀಯರ ಶಿಲ್ಪಕಲಾ ಪ್ರೇಮ ಸಾವಿರಾರು ವರ್ಷಗಳಲ್ಲಿ ಅಪರಿಮಿತವಾಗಿ ಬೆಳೆದಿರುವುದಕ್ಕೆ ಇಂದಿಗೂ ಭಾರತದುದ್ದಗಲಕ್ಕೂ ಕಂಡುಬರುವ ಸ್ಮಾರಕಗಳೇ ಸಾಕ್ಷಿ.

ಇತಿಹಾಸ 
ಅರ್ಜುಮನ್ದ್ ಬಾನು ಬೇಗಂ ಆಗ್ರಾದ ಪರ್ಶಿಯನ್ ಕುಟುಂಬದಲ್ಲಿ 1593ರಲ್ಲಿ ಜನಿಸಿದಳು. ಈಕೆಯ ತಂದೆ ಅಬುಲ್ ಹಸನ್ ಆಸಫ್ ಖಾನ್ ಸಿರಿವಂತ ಮತ್ತು ಮೊಘಲರ ರಾಜ್ಯದಲ್ಲಿ ಉತ್ತಮ ಪದವಿಯನ್ನೂ ಹೊಂದಿದ್ದ, ಅದೂ ಅಲ್ಲದೆ ಮೊಘಲ್ ದೊರೆ ಜಹಾಂಗೀರನ ಪತ್ನಿ ನೂರ್ಜಹಾನ್ ಅರ್ಜುಮನ್ದ್ ಬಾನುನ ಹತ್ತಿರದ ಸಂಬಂಧಿಯಾಗಿದ್ದಳು. ಹಾಗಾಗಿ ಅರ್ಜುಮನ್ದ್ ಬಾನುಗೆ ಮೊಘಲರೇನು ಕೈಗೆಟುಕದ ವಸ್ತುವಾಗಿರಲಿಲ್ಲ. ಆಕೆಗೆ ಮತ್ತು ಶಹಜಹಾನ್ಗೆ 1607ರಲ್ಲೇ ಮದುವೆ ನಿಶ್ಚಯವಾಗಿತ್ತು ಆದರೆ ಅವರ ಮದುವೆ ನಡೆದದ್ದು ಮಾತ್ರ 1612ರಲ್ಲಿ. ಅರ್ಜುಮನ್ದ್ ಬಾನು ಮದುವೆಯ ನಂತರ ಮುಮ್ತಾಜ್ ಮಹಲ್ ಎಂಬ ಹೆಸರನ್ನು ಪಡೆದಳು. ಮುಮ್ತಾಜ್ ಶಹಜಾನನ ಎರಡನೇ ಪತ್ನಿಯಾದರೂ ಬಹಳ ನಿಕಟವರ್ತಿಯಾಗಿದ್ದು, ಶಹಜಾನನ ರಾಜಕೀಯ ಸಲಹೆಗಾರಳಾಗಿಯೂ ಇದ್ದಳು. ಇವರಿಬ್ಬರಿಗೆ ಒಟ್ಟು ಹದಿನಾಲ್ಕು ಮಕ್ಕಳು. ತನ್ನ ಕಡೇಯ ಪ್ರಸವದಲ್ಲಿ ಅಧಿಕ ರಕ್ತಸ್ತ್ರಾವದಿಂದಾಗಿ ಮುಮ್ತಾಜ್ 38ನೇ ವಯಸ್ಸಿಗೆ ಕೊನೆಯುಸಿರೆಳೆದಳು. ಆಕೆಯನ್ನು ಅಪರಿಮಿತವಾಗಿ ಪ್ರೀತಿಸುತ್ತಿದ ಶಹಜಾನ್ ಆಕೆಯ ಸಾವಿನ ನೋವಿನಿಂದ ತನ್ನ ಕಡೆಯ ಕಾಲದವರೆಗೂ ಹೊರಬರಲಿಲ್ಲ. ಆಕೆಯ ನೆನಪಿಗಾಗಿ, ಸಮಾಧಿಯಾದ ತಾಜ್ ಮಹಲನ್ನು ಕಟ್ಟಲು 1632ದಲ್ಲಿ ಆದೇಶವನ್ನು ನೀಡಿದ ಮತ್ತು 1653ರಲ್ಲಿ ಪೂರ್ಣ ಪ್ರಮಾಣದಲ್ಲಿ ತಾಜ್ ಮಹಲ್ ನಿರ್ಮಾಣವಾಯಿತು. ಇದು ಇತಿಹಾಸ.
ನನ್ನ ಪಯಣ ಮತ್ತು ಸ್ವಗತ

ಪ್ರೀತಿಯ ಪರಿಭಾಷೆಗೆ ಅನೇಕ ಮೆಟ್ಟಿಲುಗಳು, ಕೆಲವರ ಹೃದಯ ಕೋಟೆಯಲ್ಲಿ ಪ್ರೇಮದ ನಿನಾದ ಸುಸ್ವರವಾಗಿ ಮೀಟಿದರೆ, ಇನ್ನೂ ಕೆಲವರು ಮಹಲುಗಳ ಗೋಡೆಯಲ್ಲಿ ನೆನಪಿನ ಚಿತ್ತಾರವನ್ನು ಕೆತ್ತಿ ಪ್ರೀತಿಯ ಉತ್ಪ್ರೇಕ್ಷೆಗೇ ಅಪವಾದವೆಂಬಂತೆ ನಮ್ಮ ಮುಂದೆ ನಿದರ್ಶನವಾಗಿದ್ದಾರೆ.

ಬೆಳ್ಳಂಬೆಳಗೆ ನವದೆಹಲಿಯ ರೈಲ್ವೇ ನಿಲ್ದಾಣದಿಂದ ಹೊರಡುವ ಅತಿವೇಗಿ ಶತಾಬ್ಧಿ ರೈಲಿನಲ್ಲಿ ಹೊರಟಾಗ ಕಾಲ 6 ಆಗಿತ್ತು. ಆಗಷ್ಟೇ ಮುತ್ತಿಟ್ಟ ಮಂಜಿನ ಅಮಲಿನಿಂದ ಚೇತರಿಸಿಕೊಳ್ಳುತ್ತಾ ಸಾಲು ಸಾಲು ಗದ್ದೆಗಳು ಹಸಿರಿನ ನಗುವನ್ನು ಚೆಲ್ಲುತ್ತಾ ಆಹ್ಲಾದಕರ ವಾತಾವರಣವನ್ನೇ ಸೃಷ್ಟಿಸಿತ್ತು. ತವಕವೋ, ಪುಳಕವೋ ಅಥವಾ ಸಹಜ ಉತ್ಸಾಹವೋ ಏನೋ ಎಂದೂ ಕಂಡಿರದ ಆ ಜಗತ್ತಿನ ಅದ್ಬುತವನ್ನು ನೋಡಬೇಕೆಂಬ ಬಯಕೆ ನಮ್ಮ ರೈಲಿನ ಗತಿಗಿಂತಲೂ ವೇಗವಾಗಿ ಸಾಗುತ್ತಿತ್ತು.

ಮನುಷ್ಯನ ಆಲೋಚನೆಗಳಿಗೆ ಅನೇಕ ಮುಖಗಳು, ನಾವು ಕಂಡ, ಕೇಳಿದ ನಮ್ಮ ಪರಿಧಿಯೊಳಗಿನ ಜ್ಞಾನದ ತೆವಲಿಗೆ ಪ್ರತೀ ಮುಖದ ಬಾಯಿಯಲ್ಲೂ ಅನೇಕ ವಿಚಾರಗಳು ಆಹಾರವಾಗುತ್ತವೆ. ನಿಜವಾಗಲೂ ಶಹಜಾನನು ತನ್ನ ಪತ್ನಿ-ಪ್ರೇಯಸಿಗಾಗಿ ಆ ಸ್ಮಾರಕವನ್ನು ಕಟ್ಟಿಸಿದನೇ? ಹಾಗಿದ್ದರೆ ಅಲ್ಲಿರುವ ಎರಡು ಸಮಾಧಿಗಳ ಎತ್ತರದಲ್ಲಿ ತಾರತಮ್ಯವೇಕೆ? ತನ್ನ ಪ್ರೇಯಸಿಗೆ ಪ್ರಸವದ ತೊಂದರೆ ಇರುವುದನ್ನು ಅರಿತರೂ ಆತ ಮುಮ್ತಾಜ್ ನಿಂದ 14 ಮಕ್ಕಳನ್ನು ಪಡೆದದ್ದು ಯಾಕೆ? ಅಥವಾ ಇತ್ತೀಚಿನ ಕೆಲವು ವಿಚಾರಗಳಂತೆ ತಾಜ್ ಮಹಲ್ ಎಂಬುದು ಮೊದಲು ಹಿಂದೂ ದೇವಾಲಯವಾಗಿದ್ದು ಮೊಘಲರು ಅದನ್ನು ಕೆಡವಿ ಸಮಾಧಿ ಮಾಡಿಕೊಂಡರೇ?
ಹೀಗೆ ಅನೇಕ ಪ್ರಶ್ನೆಗಳು.. ವಿಚಾರ ಏನೇ ಇರಲಿ ಶತಮಾನಗಳಿಂದ ಈ ಸ್ಮಾರಕ ಪ್ರೇಮದ ಪ್ರತೀಕವಾಗಿ, ಪ್ರೀತಿಯ ದ್ಯೋತಕವಾಗಿ ನಮ್ಮ ಮನಸ್ಸಲ್ಲಿ ನೆಲೆಸಿರುವುದನ್ನು ಯಾರೂ ಅಲ್ಲಗಳೆಯುವಂತಿಲ್ಲ.
ನಮ್ಮ ರೈಲು ಆಗ್ರಾವನ್ನು ತಲುಪುವಾಗ ಸರಿಸುಮಾರು ಬೆಳಿಗ್ಗೆ 8-30 ಆಗಿತ್ತು. ಅಲ್ಲೇ ಇರುವ ರಿಕ್ಷಾನ ಹಿಡಿದು ಆ ಅಮೃತಶಿಲೆಯ ಅದ್ಭುತ ಪ್ರಪಂಚಕ್ಕೆ ನಮ್ಮ ಪಯಣ ಸಾಗಿತ್ತು. ನೂರಾರು ಜನರು, ನೂರಾರು ವೇಷಭೂಷಣಗಳು, ಆ ಕಡಿದಾದ ದಾರಿ, ಅಲ್ಲಲ್ಲಿ ಸ್ಲಮ್ಮಗಳಂತ ಮನೆಗಳ ನಡುವೆ ಸಾಗಿ ಪ್ರಪಂಚದ ಅದ್ಭುತವೊಂದು ಸೆಟೆದು ನಿಂತದ್ದು ಸೋಜಿಗವೇ ಸರಿ. ಆ ಜನಜಂಗುಳಿಯ ಮಾಲಿನ್ಯದಲ್ಲಿ ಅವರೀರ್ವರು ಸುಪ್ತವಾಗಿ ಮಲಗಿ ನಗುತ್ತಿರಬಹುದೇ?

ಹತ್ತಾರು ವರ್ಷಗಳ ಕಾಲ ಇಪ್ಪತ್ತು ಸಾವಿರಕ್ಕೂ ಹೆಚ್ಚಿನ ಕರ್ಮಚಾರಿಗಳು ಈ ಸ್ಮಾರಕವನ್ನು ಕಟ್ಟಿದರಂತೆ, ಸ್ಮಾರಕದ ಗೇಟಿನ ಒಳಗಿಂದ ಸಾಗಿದಾಗ ಆ ಪರಿಶ್ರಮದ ಬೆಲೆ ನಿಮಗೆ ಅರಿಯದೇ ಇರದು.
ಯಮುನಾ ನದಿಯ ಹೊಸ್ತಿಲಲ್ಲಿ ಎದ್ದು ನಿಂತ ಆ ಅದ್ಬುತ ಬಿಳಿಯ ಸೌಧವೊಂದು ತನ್ನ ಆಕಾರ, ನಿಖರತೆ ಮತ್ತು ಸೌಂದರ್ಯಕ್ಕೆ ನಿಮ್ಮನ್ನು ಮೂಕವಿಸ್ಮಿತವಾಗಿಸದಿದ್ದರೆ ನಿಮಗೆ ಕಲಾಕೃತಿಯನ್ನು ಅಸ್ವಾಧಿಸುವ ಮನಸ್ಸಿಲ್ಲವೆಂದೇ ಅರ್ಥ!
ಪ್ರೇಮಿಗಳು, ಮಕ್ಕಳು, ಹೊಸದಾಗಿ ಮದುವೆಯಾದವರು, ಮದುವೆಯಾಗಬೇಕೆಂದುಕೊಂಡವರು, ಹಿರಿಯರು, ಕಿರಿಯರು, ಹಳ್ಳಿಯವರು, ಪಟ್ಟಣಿಗರು, ವಿದೇಶಿಗಳು,ಪರದೇಶಿಗಳು ಹೀಗೆ ಅಸಂಖ್ಯರು ಅದರ ಮುಂದೆ ನಿಂತು ಸೆಲ್ಫಿ, ಫೋಟೋ ತೆಗೆಯುವುದರಲ್ಲೇ ತಲ್ಲೀನರಾಗಿದ್ದಾರೆ. 250ರೂ ಗೆ ಟಿಕೆಟ್ ಕೊಂಡವರು ಶಹಜಾನ್ ಮತ್ತು ಮುಮ್ತಾಜ್ ನ ಸಮಾಧಿಯನ್ನು ನೋಡಲು ತಾಜ್ ಮಹಲ್ನ ಮೆಟ್ಟಿಲು ಹತ್ತಿ ಸಮಾಧಿಗೆ ಸುತ್ತು ಹೊಡೆದು ಅದೇ ನಿಜವಾದ ಸಮಾಧಿಯೆಂದು, ಪ್ರೇಮದ ಸ್ಮಾರಕವೆಂದು ನಂಬಿ ಪುಳಕಿತರಾದರು, ಆದರೆ ನಿಜವಾದ ಸಮಾಧಿ ಅಲ್ಲೇ ನೆಲಮಾಳಿಗೆಯ ಕತ್ತಲಲ್ಲಿ ಬೆಚ್ಚನೆ ಮುಚ್ಚಿಟ್ಟಿರುವುದರ ಅರಿವು ಅನೇಕರಿಗಿಲ್ಲ. ಆ ಸೂಕ್ಷ್ಮ ಕೆತ್ತನೆಯ ಸಂಧಿ ಸಂಧಿಗಳಲ್ಲಿ ಅನೇಕ ಪಿಸುಧ್ವನಿಗಳು ಪ್ರತಿಧ್ವನಿಸುತ್ತಾ ನೆನಪುಗಳ ಮಾಲೆಯನ್ನು ಹೆಣೆಯುತ್ತಾ ಶತಮಾನಗಳ ಕತೆಯನ್ನು ಮರುಕಳಿಸುವಂತೆ ಸಾಗಿತ್ತು. 

ಅದ್ಬುತವೆನ್ನುವುದು ನಮ್ಮ ನಮ್ಮ ವಿವೇಚನೆ ಪರಿಕಲ್ಪನೆಗೆ ಬಿಟ್ಟದ್ದು, ನನಗೆ ಅದ್ಭುತವೆಂದೆನಿಸಿದ್ದು ನಿಮಗೆ ಅನಿಸಬೇಕಿಲ್ಲ. ನನಗೆ ಸುಂದರವಾಗಿ ಕಂಡದ್ದು ನಿಮಗೆ ಸಾಧಾರಣವಾಗಿರಬಹುದು. 
ದೃಷ್ಟಿಕೋನದಿಂದ ಪರಿಕಲ್ಪನೆಗೆ ವಿಕಸಿತವಾಗುವ ಮನಸ್ಸಿನ ಭಾವನೆಗಳಿಗೆ ಒಂದು ನವಿರಾದ ಕೊಂಡಿ ಬೇಕಷ್ಟೇ,ಆಸ್ವಾದಿಸಲು-ಅನುಭವಿಸಲು.
ಅದರೆ ನಾವು ಭಾರತೀಯರಿಗೆ ಭಾವನೆಗಿಂತ ಹೆಚ್ಚು ನಮಗೆ ಶೋಕಿಯಲ್ಲಿ ಆಸಕ್ತಿ!

- ಮಹಿ ಮುಲ್ಕಿ

No comments:

Post a Comment