ನೂರು ದಾರಿಯ ಸುತ್ತ ವೃತ್ತದಂತಹ ಪರಿಧಿ
ಯಾರು ಹಾಯರು ಅತ್ತ ದಿಗಂತದಂಚಿನ ಶರಧಿ
ಕಂಡ ಕಣ್ಣುಗಳೇನು ಮಾತು ಉದುರಿಸುವುದೇನು
ಕಿವಿಯ ಟಮಟೆಯ ಸುತ್ತ ದೃಷ್ಠಿ ನೆಲೆಯುವುದೇನು
ಪದರ ಪದರದಿ ಅಡಗೆ ಸತ್ಯ ಹುದುಗಿಹುದು
ಮಿಥ್ಯದಾಟವೋ ಇದು ಕಲಿಯುಗದ ನರ್ತನ..
ಕೂಗಿ ಕರೆದರೆಂದು ಓಡಿ ಹೋಗುವ ಮೂಢ
ಕರೆದ ಧ್ವನಿಯಂಚಲಿ ಮೊಳಗಿತೇ ಸ್ವಾರ್ಥದ ಕಹಳೆ
ಮೀಟಿ ಸಾಸಿರ ತಂತಿ ಅಪಸ್ವರದ ನಾದಕ್ಕೆ
ಬಾರಿಸೈ ದೇಹವೆಂಬ ಡಮರು ಏದುಸಿರ ತಾಳಕ್ಕೆ..
ಕೂಡಿ ಕಳೆವರು ಪ್ರಸ್ಥ ಮೈಮೇಲೆ ಎರಗೆರಗಿ
ಎದೆಯ ತೀಡುತ್ತಾ ಮಾಂಸದ ತೇಗು ಅಡಗಡಗಿ
ತೋಳ ತಬ್ಬಲು ಕಾಣೆ ಕಾಮ ಕರಗದ ಭೀತಿ
ಮಿಥ್ಯೆಯೈ ಮಧು ಸುಖವು ಹಿಪ್ಪೆ ಹಿಂಡಿದ ಹಾಗೆ..
ಗರ್ಭದೊಳಗೊಂದು ಕೂಸು ಹೆಣ್ಣೋ ಗಂಡೊ
ಅವಳೊಳಗೆ ಅವನಂತೆ ಬಿತ್ತಿ ಫಲ ಕಾತರಿಸುತ
ಪುಷ್ಪವೊಂದು ಸ್ಪರ್ಷವಾಗಿ ಫಲ ಉದಿಸೆ ಕಂಡಿರಾ
ಯೋನಿಯರಸುತ್ತಾ ಪರಪಂಚದೆಡೆ ಬಂದಿರಾ..
ಯಾರಾಕೆ ಅಬ್ಬೆಯೇ ಮೊಲೆ ನೀಡಿ ಸಲಹಿದವಳು
ಹರಿದಂಚಿನ ಅರಿವೆಯ ಕಟ್ಟಿ ಬೆಚ್ಚನೆಗೆ ಇಟ್ಟವಳು
ತೂಗುತ್ತಾ ತೆವಲತ್ತಾ ನೋವ ಮರೆಯುತ್ತಾ ಮುದಿಯೆ
ಯಾರಾಕೆ ನಂಟಳೇ ಅಂಟುತ್ತಾ ನಡೆದವಳು..
ಹಿರಿದಾದ ದೇಹಕ್ಕೆ ತುತ್ತು ಸಾಕಾಗದ ಹೊತ್ತು
ಮುತ್ತನರಸುತ್ತಾ ಕುದುರೆ ಹಿಮ್ಮಖ ಚಲಿಸಿದಾಗ
ಹಾರಾಡಿ ಏರಾಡಿ ಕಾಮ ಕದನದಿ ಹೊಯ್ದಾಡಿ
ನರಕವೋ ನಾಕವೋ ಕಂಡಿರಾ ಮಿಥ್ಯ ಸುಖವನ್ನು
ಕೂಡಿದವರು ಕಳೆವರು ಕೂಡಲು ಎರಡು ದೇಹ
ದೇಹ ಲಾಲಸೆ ಹೊತ್ತು ನಿರ್ಲಜ್ಜ ಮನ
ಮನದೊಳಗೆ ಹುದುಗಿದ್ದ ಆಸೆ ದುಗುಡದ ಪುಂಜ
ಧುತ್ತೆಂದು ಭೋರ್ಗರೆತು ಅಂಕೆ ಮೀರಿದ ಮನುಜ
ಪರಿಧಿ ದಾಟಲು ಇನ್ನೇನು ಹತ್ತೇ ಹೆಜ್ಜೆ
ಸುತ್ತಾಡಿ ಸುತ್ತಾಡಿ ಸ್ಥಾನ ಪಲ್ಲಟ
ಕೂಡಲು ಹೋದವ ಕೂಡಿ ಕೂಡಿ ಕೂಡುತ್ತಾ
ಮತ್ತೆ ಸೇರಿದೆ ಅದೇ ಗರ್ಭವ ತಿರುಗಿ, ಕತ್ತಲೆಯ ಕಾರಾಗ್ರಹ
ಪರಿಧಿಗದು ಅಂತ್ಯವಿಲ್ಲ ಪುನರ್ಸಂಭವಿಸುವುದು
ಕಾಲಚಕ್ರವದು ಕಲಿಯುಗದ ನರ್ತನ..
- ಮಹಿ
Nice one...
ReplyDelete