Thursday, May 14, 2020

ಕಣ್ಮರೆಯಾದ ನಮ್ಮ ಕಕ್ವ ಶಾಲೆ

ಅದು 1938ರ ಇಸವಿ, ನಮ್ಮ ದೇಶ ಪರಕೀಯರ ಆಳ್ವಿಕೆಯಲ್ಲಿ ನಲುಗಿ, ಸ್ವತಂತ್ರಕ್ಕಾಗಿ ಹಂಬಲಿಸುತ್ತಾ ಇದ್ದ ಕಾಲ. ದೇಶಕ್ಕೆ ದೇಶವೇ ಬಡತನ, ಅಪೌಷ್ಠಿಕತೆ, ಅಸ್ಪ್ರಶ್ಯತೆ, ಅನಕ್ಷರತೆಯಿಂದ ನಲುಗಿ ಬೆಂಡಾಗಿ ಬಸವಳಿದಿದ್ದ ಕಾಲ. ಅಂತಹ ಸಂದಿಗ್ಧ ಕಾಲಘಟ್ಟದಲ್ಲಿ ಮೂಲಿಕೆ(ಇಂದಿನ ಮುಲ್ಕಿ) ಸೀಮೆಯ ಕಕ್ವ ಎಂಬ ಒಂದು ಕುಗ್ರಾಮದಲ್ಲಿ ಶಿಕ್ಷಣ ಕ್ರಾಂತಿಗೆ ನಾಂದಿ ಹಾಡಿತ್ತು ಈ ನಮ್ಮ ಕಕ್ವ ಶಾಲೆ.
ಮುಲ್ಕಿಯಿಂದ ಎರಡೂವರೆ ಕಿಲೋ ಮೀಟರ್ನಷ್ಟು ದೂರದಲ್ಲಿರುವ ಅಭಿವೃದ್ಧಿಯ ಬೆಳಕೇ ಕಂಡಿರದ ಆ ದಿನಗಳಲ್ಲಿ ಸುತ್ತಲಿನ ನಾಲ್ಕ್ಹತ್ತು ಹಳ್ಳಿಯ ಮಕ್ಕಳಲ್ಲಿ ಶಿಕ್ಷಣದ ಆಸೆಯನ್ನು ಚಿಗುರೊಡೆಸಿದ್ದು ಇದೇ ಶಾಲೆ.

ಶಾಲೆಯೆಂದರೆ ನೂರಾರು ನೆನಪುಗಳನ್ನು ಹೊತ್ತ ಒಂದು ಸುಂದರ ಕನಸಿನಂತೆ,ಅಲ್ಲಿದ್ದದ್ದು ಕೇವಲ ಐದನೇ ತರಗತಿಯವರೆಗೆ ಕಲಿಯುವ ಅವಕಾಶ ಆದರೆ ಪಾಠಗಳ ಜೊತೆಗೆ ಎಳವೆಯಲ್ಲೇ ಜೀವನಾನುಭವವನ್ನು ಕಲಿಸಿದ ಪರಿ ಎಂದಿಗೂ ಮರೆಯುವಂತಿಲ್ಲ.ನಾನು ಈ ಶಾಲೆಗೆ ಒಂದನೇ ತರಗತಿಗೆ ಸೇರಿದ್ದು 1999ನೇ ಇಸವಿಯಲ್ಲಿ, ಆ ಕಾಲಕ್ಕೆ ನಮ್ಮ ಕಕ್ವ ಶಾಲೆಗೆ 61ರ ತುಂಬು ಹರೆಯ. ಅಲ್ಲಿದ್ದದ್ದು ಒಬ್ಬ ಮುಖ್ಯ ಶಿಕ್ಷಕಿ, ಮೇರಿಯೆಂದು ಆಕೆಯ ಹೆಸರು, ಮತ್ತಿಬ್ಬರು ಸಹಾಯಕ ಶಿಕ್ಷಕಿಯರು.

ಮೇರಿ ಟೀಚರ್ನ ಬಗ್ಗೆ ಎರಡು ಮಾತು ಬರೆಯದಿದ್ದರೆ ಈ ಲೇಖನ ಅಪೂರ್ಣವಾಗುತ್ತದೆ. ನೂರಾರು ಮಕ್ಕಳಿಗೆ ವಿದ್ಯೆ ನೀಡಿದ ಮಹಾತಾಯಿ ಆಕೆ. ಅವರ ಮನೆ ಇದ್ದದ್ದು ದ್ವೀಪ(ಕುದುರು)ದಲ್ಲಿ, ಅಲ್ಲಿಂದ ಪ್ರತೀದಿನ ದೋಣಿಯ ಮೂಲಕ ನದಿಯ ದಾಟಿ ಸುಮಾರು ಎರಡು ಕಿಲೋ ಮೀಟರ್ನಷ್ಟು ಕಲ್ಲು ಮುಳ್ಳಿನ ಹಾದಿಯನ್ನು ನಡೆದು ಶಾಲೆಯನ್ನು ತಲುಪುತ್ತಿದ್ದರು ಆಕೆ. ಮನೆಯಲ್ಲಿ ಬುದ್ಧಿಮಾಂದ್ಯ ಮಗ, ಕೈಗೆ ಸಿಕ್ಕುವ ಸ್ವಲ್ಪ ಸಂಬಳ, ಆ ಸಂಬಳದಲ್ಲೇ ತನಗೆ ಸಹಾಯವಾಗಲಿ ಎಂದು ಶಾಲೆಗೆ ಇನ್ನೊಬ್ಬ ಶಿಕ್ಷಕಿಯನ್ನು ನೇಮಿಸಿ ಶಾಲೆಯನ್ನು ನಡೆಸುತ್ತಿದ್ದರು. ಕುಗ್ರಾಮದ ಹಳ್ಳಿಗಾಡಿನ  ಶಾಲೆಯ ಮಕ್ಕಳು ಯಾರಿಗಿಂತಲೂ ಕಡಿಮೆಯಲ್ಲ ಎಂದು ತೋರಿಸಲು ಕನ್ನಡ ಮಾಧ್ಯಮದ ಶಿಕ್ಷಣವಾದರೂ ನಮಗೆ ಒಂದನೇ ತರಗತಿಯಿಂದಲೇ ಇಂಗ್ಲೀಷನ್ನು ಕಲಿಸಿದರು. ಇಂತಹ ಮಹಾನ್ ಶಿಕ್ಷಕರಿಂದಾಗಿಯೇ ಅಲ್ಲವೇ ನಮ್ಮಲ್ಲಿ ಅಕ್ಷರ ಪ್ರಜ್ಞೆ ಮೂಡಿದ್ದು.

ಕಕ್ವ ಶಾಲೆ ನಮಗೆ ಕಲಿಸಿದ್ದು ಕೇವಲ ಅಕ್ಷರವಲ್ಲ, ಆ ಅಕ್ಷರವನ್ನು ಪ್ರೀತಿಸಲು, ಆ ಅಕ್ಷರವನ್ನು ಗೌರವಿಸಲು, ಆ ಅಕ್ಷರವನ್ನು ನಂಬಲು ಕಲಿಸಿತು. ಪ್ರತೀದಿನ ದೂರದ ಮನೆಯ ಬಾವಿಯಿಂದ ಶಾಲೆಗಾಗಿ ನೀರನ್ನು ನಾವೇ ಎತ್ತಿ ತರುತ್ತಿದ್ದೆವು. ಈಗಿನ ಶಾಲೆಗಳಂತೆ ಅಲ್ಲಿ ಕೆಲಸಕ್ಕಾಗಿ ಜನರಿರಲಿಲ್ಲ, ನಾವೇ ಪ್ರತೀದಿನ ಶಾಲೆಯನ್ನು ಗುಡಿಸಿ, ಸಾರಿಸಿ ಸ್ವಚ್ಛಗೊಳಿಸುತ್ತಿದ್ದೆವು. ನಮಗೆ ಬಿಸಿಯೂಟವಿರಲಿಲ್ಲ, ನಾವು ಮನೆಯಿಂದ ತಂದ ಪುಟ್ಟ ಬುತ್ತಿಯ ತಿಂಡಿಯನ್ನು ಹಂಚಿ ತಿನ್ನುತ್ತಿದ್ದೆವು. ಶಾಲೆಯೆಂದರೆ ದೇಗುಲವೆಂದು ನಮ್ಮ ಹರಿದ ಚಪ್ಪಲ್ಗಳನ್ನು ಹೊರಗಡೆ ಇಟ್ಟು ಬರಿಗಾಲಲ್ಲಿ ಶಾಲೆಯ ಒಳಗೆ ಹೋಗುತ್ತಿದ್ದೆವು. ವಾರಕ್ಕೆ ಒಮ್ಮೆ ಭಜನೆ ಮಾಡುತ್ತಿದ್ದೆವು. ಒಟ್ಟಿನಲ್ಲಿ ಕಕ್ವ ಶಾಲೆ ನಮಗೆ ಶಿಕ್ಷಣದೊಂದಿಗೆ ಸಹಬಾಳ್ವೆಯನ್ನು ಕಲಿಸಿತು.ಆ ಮಣ್ಣಿನ ಗೋಡೆಯ ಮೂಲೆಗಳು ಎಳವೆಯಲ್ಲೇ ನಮಗೆ ಜೀವನಾನುಭವವನ್ನು ಕಲಿಸಿತು.

ಆದರೆ ಈಗ ಆ ಶಾಲೆ ಇಲ್ಲ! ಹುಡುಕಿದರೂ ಆ ಶಾಲೆ ಸಿಗುವುದಿಲ್ಲ.ಆ ಶಾಲೆ ಈಗ ಹೊಸರೂಪದೊಂದಿಗೆ ಸರಕಾರಿ ಶಾಲೆಯಾಗಿ, ಹೊಸ ಕಟ್ಟಡದೊಂದಿಗೆ, ಹೊಸ ಉತ್ಸಾಹಿ ಶಿಕ್ಷಕರಿಂದಾಗಿ ತನ್ನ ಹಳೆಯ ಚಾಳಿಯೆಂಬಂತೆ ಸ್ವಲ್ಪವೂ ಹಳೆಯ ಶಾಲೆಯ ಹೆಸರಿಗೆ ಕುತ್ತು ಬರದಂತೆ ತನ್ನ ಶಿಕ್ಷಣ ಕ್ರಾಂತಿಯನ್ನು ಮುಂದುವರೆಸಿದೆ. ಆದರೆ ಹಳೆಯ ಶಾಲೆ, ಆ ಕಟ್ಟಡ, ಆ ನೆನಪುಗಳು, ಆ ಕಾಲ, ಆ ಬಾಲ್ಯ ಎಲ್ಲೋ ಇತಿಹಾಸ ಸೇರಿ ಹುದುಗಿದಂತೆ ಮತ್ತೆ ಮತ್ತೆ ಮೂಲದ ಬೇರನ್ನು ಹುಡುಕುತ್ತಾ ಸಾಗುತ್ತಿದೆ.
(ಚಿತ್ರ: ಹಳೆಯ ಶಾಲೆಯ ಅವಶೇಷ)

ಇತ್ತೀಚೆಗೆ ಕಕ್ವಶಾಲೆಯ ಪಕ್ಕ ಹೋದಾಗ ಕಂಡದ್ದು ಕೇವಲ ಕುಸಿದ ಗೋಡೆ ಮತ್ತು ಇನ್ನೂ ಸ್ಥಿರವಾಗಿರುವ ಮೆಟ್ಟಿಲುಗಳು.ಅದೆಷ್ಟು ಮಕ್ಕಳ ಪಿಸುಧ್ವನಿ ಆ ಕುಸಿದ ಗೋಡೆಗಳಡಿ ಸಿಲುಕಿ ಕಣ್ಮರೆಯಾದಂತೆ.
ದೂರದಲ್ಲಿ ಒಬ್ಬಂಟಿಯಾಗಿ ನಿಂತ ಆ ಮರ ತನ್ನ ಗೆಳೆಯನನ್ನು ಕಳೆದುಕೊಂದು ರೋಧಿಸುತ್ತಾ ನನ್ನ ನೋಡಿ, ನೀನು ಆಡಿ ಬೆಳೆದ ಅಂಗಳದಿ ನಿಂತು ಬಾ ಒಮ್ಮೆ ತಬ್ಬಿಕೋ ಎಂದು ಗೋಗರೆದಂತೆ,
ಆ ಮೆಟ್ಟಿಲುಗಳ ಸಾಲು ಇನ್ನೂ ಪುಟ್ಟ ಪುಟ್ಟ ಹೆಜ್ಜೆಗಳ ಅಪೇಕ್ಷೆಯಿಂದ ಕಾದೂ ಕಾದೂ ಸುಸ್ತಾದಂತೆ.. ಹೀಗೆ ಭಾವನೆಗಳ ಮಹಾಸ್ಫೋಟವೇ ನಡೆಯಿತು ಮನಸಿನಾಳದಲ್ಲಿ.


ನಾನು ಕಲಿತ ಶಾಲೆ,ನಾನು ಮೊದಲು ಸ್ಲೇಟ್ ಹಿಡಿದ ಶಾಲೆ,ಅ ಆ ಬರೆಯಲು, ಬಲಗೈಯಲ್ಲಿ ಬರೆಯುವ ಬದಲು ಎಡಗೈಯಲ್ಲಿ ಬರೆದಾಗ ಅದನ್ನೇ ಬೆನ್ನುತಟ್ಟಿ ಮುಂದುವರಿಸಿದ ಶಾಲೆ, ನನಗೆ ಪೆನ್ಸಿಲ್ ಹಿಡಿದು, ತಪ್ಪಾದಾಗ ಒರೆಸಿ ಬರೆಸಿದ ಶಾಲೆ, ಪೆನ್ನು ಹಿಡಿದು ತಪ್ಪಾಗದಂತೆ ಬರೆಯಲು ಕಲಿಸಿದ ಶಾಲೆ. ಆ ಶಾಲೆಯಲ್ಲಿ ಈಗ ಮಕ್ಕಳ ಕಲರವವಿಲ್ಲ,ಗಂಟೆಯ ನಿನಾದವಿಲ್ಲ,ಮೇರಿ ಟೀಚರ್ ಬೆತ್ತ ಹಿಡಿದುಕೊಂಡು ನಿಂತದ್ದೂ ಕಂಡಿಲ್ಲ. ಟೀಚರ್ನ ಕಣ್ತಪ್ಪಿಸಿ ತಿನ್ನುತ್ತಿದ್ದ ಹುಣಸೆ,ಬುಗರಿ,ಮಾವುಗಳಿಲ್ಲ.ಅಂಗನವಾಡಿಯ ಡಬ್ಬಿಯೊಳಗಿದ್ದ ಬೆಲ್ಲ ಕದಿಯುವ ಎಂದರೆ ಅಲ್ಲಿ ಅಂಗನವಾಡಿಯೇ ಇಲ್ಲ!

ಕನಸುಗಳನ್ನು ಕಟ್ಟುತ್ತಾ ಮುಂದುವರಿದ ನಮಗೆ, ಹೊರ ಊರಿಗೆ ಹಾರಾಡುತ್ತಾ ಗೂಡು ಮರೆತಂತೆ ಈ ಶಾಲೆಯನ್ನು,  ಶಾಲೆ ಇರುವ ಜಾಗವನ್ನು ಉಳಿಸಿಕೊಳ್ಳಲಾಗಲಿಲ್ಲ, ತುಂಡು ಜಾಗಕ್ಕಾಗಿ ಯುದ್ಧಗಳೇ ನಡೆಯುವಾಗ ಶಾಲೆ ಉರುಳಿಸುವುದೇನು ಮಹಾ? ಶಾಲೆ ನಡೆಸಲು ಸಾಧ್ಯವೇ ಇಲ್ಲದಪರಿಸ್ಥಿತಿ ಬಂದಾಗ ಸರಕಾರವೇನೋ ಶಾಲೆಯನ್ನು ಸುಪರ್ದಿಗೆ ತೆಗೆದುಕೊಂಡು ಬೇರೆ ಜಾಗದಲ್ಲಿ ಶಾಲೆ ಕಟ್ಟಿದರೂ,ಕಕ್ವ ಶಾಲೆ ಎಂದರೆ ನನ್ನ ನೆನಪಿಗೆ ಬರುವುದು ಅದೇ ಹಳೆಯ ಹಳದಿ ಕಪ್ಪು ಗೋಡೆ,ಉದ್ದನೆಯ ಕಿಟಕಿ, ಅಲ್ಲಲ್ಲಿ ಗೆದ್ದಲಿನ ಹುತ್ತ, ಸೋರುವ ಚಾವಣಿ!

ಸಾವಿರಾರು ಜನರ ಜೀವನ ಉದ್ಧರಿಸಿದ ಶಾಲೆ ಇಂದು ನೆನಪು ಮಾತ್ರ!
ಹಳೆಯ ನೆನಪುಗಳನ್ನು ಹೊತ್ತು ಹೊಸ ಶಾಲೆಯೆಡೆ ಪಯಣಿಸಿದೆ. ಹಳೆಯ ನೆನಪು ಹೊಸ ಹುರುಪು ಎಂಬಂತೆ ಹೊಸ ಶಾಲೆ ನನ್ನ ಬರಸೆಳೆಯಿತು! ಮತ್ತೆ ಬಾಲ್ಯ ಕಣ್ಣ ಮುಂದೆ ನಲಿದಾಡಿತು!

- ಮಹಿ ಮುಲ್ಕಿ

1 comment:

  1. ನನ್ನ ಶ್ಯಾಲೆಯ ನೆನಪಾಯಿತು. ತುಂಬಾ ಚೆನ್ನಾಗಿ ಮೂಡಿ ಬಂದಿದೆ

    ReplyDelete