ನದಿ ಮೂಲ, ಋಷಿ ಮೂಲ, ಭಾಷೆಯ ಮೂಲವನ್ನು ಹುಡುಕುವುದು ಬಹಳ ಕಠಿಣ ಕಜ್ಜ. ಭಾಷೆ ಎಂಬುದು ನಿರಂತರ ಹರಿಯುತ್ತಿರುವ ನೀರಿನಂತೆ. ಆಧುನಿಕ ಜಗತ್ತಿನಲ್ಲಿ ವೈಜ್ಞಾನಿಕವಾಗಿ ನಾವು ಎಷ್ಟೇ ಮುಂದುವರಿದಿದ್ದರೂ ಇನ್ನೂ ಭಾಷೆಗಳ ಮೂಲ, ಉಗಮದ ಬಗೆಗಿನ ಜಿಜ್ಞಾಸೆಗೆ ಎಲ್ಲರೂ ಒಪ್ಪತಕ್ಕ ಉತ್ತರ ದೊರೆತಿಲ್ಲ.
ದ್ರಾವಿಡ ಭಾಷಾ ಕವಲಿನಲ್ಲಿ ಅನೇಕ ಪುರಾತನ ಭಾಷೆಗಳಿವೆ ಅವುಗಳಲ್ಲಿ ತುಳು ಕೂಡಾ ಒಂದು. ದಕ್ಷಿಣ ಭಾರತದ ಒಂದು ಪುಟ್ಟ ಭೂ ಭಾಗಕ್ಕೆ ಸೀಮಿತವಾದ ತುಳು ಭಾಷೆಯ ಉಗಮ ಹೇಗಾಯಿತು? ತುಳುವಿನ ಮೂಲ ಯಾವುದು? ತುಳು ಭಾಷಿಗರು ಇಂದಿನ ತುಳುನಾಡಿನ ಮೂಲನಿವಾಸಿಗಳೇ? ಹೀಗೆ ಅನೇಕ ಪ್ರಶ್ನೆಗಳ ಸರಮಾಲೆಯನ್ನು ಹೆಣೆಯುತ್ತಾ ಹೊರಟ ನನಗೆ ಅನಿರೀಕ್ಷಿತವಾಗಿ ಪಾಕಿಸ್ಥಾನದ ಬಲೂಚಿಸ್ಥಾನ ಪ್ರಾಂತ್ಯದಲ್ಲಿ ಮಾತನಾಡುವ ಬ್ರಹೂಇ ಭಾಷೆಯ ಪರಿಚಿತವಾಯಿತು.
ಬ್ರಹೂಇ ಭಾಷೆ ಪಾಕಿಸ್ಥಾನದಲ್ಲಿರುವ ಬ್ರಹೂಇ ಜನರ ಆಡು ನುಡಿ. ಇವರ ಬುಡಕಟ್ಟು ಇರಾನ್, ಅಫ್ಘಾನಿಸ್ಥಾನದಲ್ಲೂ ಇವೆ. ಈ ಭಾಷೆಯನ್ನು ದ್ರಾವಿಡ ಭಾಷಾ ವರ್ಗಕ್ಕೆ ಸೇರಿದ ಭಾಷೆಯೆಂದು ಗುರುತಿಸಲಾಗಿದೆ. ಸುಮಾರು ನಾಲ್ಕು ದಶಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆ ಬ್ರಹೂಇ ಭಾಷೆಗಿದೆ. ದಕ್ಷಿಣ ಭಾರತದೆಲ್ಲೆಡೆ ಹರಡಿರುವ ದ್ರಾವಿಡ ಭಾಷಾ ವರ್ಗದ ನುಡಿಯೊಂದು ಉತ್ತರದ ಅದೂ ಸಾವಿರಾರು ಮೈಲಿ ದೂರದಲ್ಲಿ ಇರುವ ಕುರುಹು ಹಲವಾರು ಸಂಶೋಧನೆಗಳಗೆ ಎಡೆಮಾಡಿಕೊಟ್ಟಿತು. ಕೆಲವರು ಪೂರ್ವದಲ್ಲಿ ದ್ರಾವಿಡ ಭಾಷೆಗಳನ್ನಾಡುವ ಜನಾಂಗ ಸಿಂಧೂ ನಾಗರಿಕತೆಯ ಮೂಲದವರಾಗಿದ್ದು, ಕಾಲಾಂತರದಲ್ಲಿ ನಾಗರಿಕತೆ ಅವನತಿಯಂಚಿಗೆ ಬಂದಾಗ ಈ ದ್ರಾವಿಡ ಜನಾಂಗ ದಕ್ಷಿಣದೆಡೆಗೆ ವಲಸೆ ಬಂದುದಾಗಿಯೂ, ಇವರ ಕವಲೊಂದು ಇನ್ನೂ ಉತ್ತರದಲ್ಲೇ ಉಳಿದರೆಂದು ಹೇಳಿದರೆ ಇನ್ನೂ ಕೆಲವರು ಬ್ರಹೂಇ ಮಾತನಾಡುವ ಜನಾಂಗ ದಕ್ಷಿಣದಿಂದ ಉತ್ತರದೆಡೆ ಸುಮಾರು ಸಾವಿರದೈನೂರು ವರ್ಷಗಳ ಮೊದಲು ವಲಸೆ ಹೋಗಿರಬಹುದು ಎಂದೂ ಊಹಿಸಿದ್ದಾರೆ.
ಏನೇ ಇರಲಿ ಭಾಷಾ ವಿಜ್ಞಾನಿಗಳಿಗೆ ದಕ್ಷಿಣದ ದ್ರಾವಿಡ ನುಡಿಗಳೊಂದಿಗೆ ಬ್ರಹೂಇನ ಹೋಲಿಕೆ ಮಾಡಿ ಅಧ್ಯಯನ ನಡೆಸುವುದು ಮತ್ತು ಭಾಷೆಯ ಉಗಮದ ಬಗ್ಗೆ ಸಂಶೋಧಿಸುವುದು ಹೊಸ ವಿಷಯವಾಯಿತು. ಈ ನಿಟ್ಟಿನಲ್ಲಿ ಹಲವಾರು ಸಂಶೋಧಕರು ಬ್ರಹೂಇ ಮತ್ತು ತಮಿಳು ಭಾಷೆಗಿರುವ ಸಾಮ್ಯತೆ, ಬ್ರಹೂಇ-ಕನ್ನಡ, ಬ್ರಹೂಇ-ತೆಲುಗು ಹೀಗೆ ದಕ್ಷಿಣದ ದೊಡ್ಡ ದೊಡ್ಡ ನುಡಿಗಳೊಂದಿಗೆ ತುಲನೆ ಮಾಡಿ ಪುಸ್ತಕಗಳನ್ನೇ ಬರೆದರು. ಆದರೆ ಯಾವೊಬ್ಬ ಸಂಶೋಧಕನೂ ಬ್ರಹೂಇಗೆ ಮತ್ತು ತುಳುವಿಗೆ ಯಾವುದೇ ರೀತಿಯ ಸಂಬಂಧವಿರುವ ಕುರಿತು ಊಹಿಸದೇ ಇರುವುದೂ ಕೂಡ ಸೋಜಿಗವೇ ಸರಿ. ದಶಕಗಳಿಂದ ಹರಿದು ಬಂದ ತುಳುವಿನ ಕುರಿತಾದ ಉದಾಸೀನ ಧೋರಣೆ ಇಲ್ಲೂ ಮುಂದುವರಿದದ್ದು ಸ್ಪಷ್ಟ.
ದ್ರಾವಿಡ ಭಾಷೆಗಳು ತನ್ನ ಮೂಲ ಸ್ವರೂಪಗಳಿಂದ ಕವಲೊಡೆದು ಒಂದೊಂದಾಗಿ ಹೊಸ ಭಾಷೆಗಳಾಗಿ ಬೆಳವಣಿಗೆ ಹೊಂದಿದವು. ಇವುಗಳಲ್ಲಿ ತುಳು ಬಹಳ ಬೇಗನೆ ಮೂಲ ಭಾಷೆಯಿಂದ ಕವಲೊಡೆದು ಸ್ವತಂತ್ರ ಅಸ್ಥಿತ್ವವನ್ನು ಪಡೆದುಕೊಂಡಿತು. ತುಳು ಭಾಷೆ ಮುಂದೆ ಅನೇಕ ರೂಪವನ್ನು ಪಡೆದುಕೊಂಡು ಪೂರ್ವದ ಪಳಂತುಳು, ನಡು ತುಳು ಮತ್ತು ಪೊಸ ತುಳು ರೂಪಗಳಾಗಿ ಬೆಳೆದವು. ಸುಮಾರು ಏಳ್ನೂರು ವರ್ಷಗಳ ಹಿಂದಿನ ತುಳು ಈಗಿನ ತುಳುವಿಗಿಂತ ಬಹಳ ವಿಭಿನ್ನವಾಗಿತ್ತು. ಈಗಿನ ತುಳು ಸಂಸ್ಕೃತ, ಕನ್ನಡದ ಗಾಢ ಪ್ರಭಾವದಿಂದಾಗಿ ಅನೇಕ ತನ್ನ ಪದಗಳನ್ನು ಕಳೆದುಕೊಂಡಿತು.
ಭಾಷೆಗಳ ತೌಲನಿಕ ಅಧ್ಯಯನ ಒಂದು ಬಹಳ ಕ್ಲಿಷ್ಟ ಕೆಲಸ. ಮೂಲ ಪದಗಳನ್ನು ಹುಡುಕಿ ಹೆಕ್ಕಿ ತೆಗೆದು ಅದಕ್ಕೆ ಸರಿಹೊಂದುವ ಇನ್ನೊಂದು ಭಾಷೆಯ ಮೂಲ ಪದವನ್ನು ಹುಡುಕಿ ಸಾಮ್ಯತೆಯನ್ನು ಗುರುತಿಸಬೇಕು. ಇಂತಹ ಅಧ್ಯಯನ ನಡೆಸಲು ಕನಿಷ್ಟ ಒಂದು ಭಾಷೆಯಲ್ಲಾದರೂ ಪ್ರೌಢಿಮೆಯನ್ನು ಬೆಳೆಸಿಕೊಳ್ಳಬೇಕು. ನಾನು ತುಳು ಮತ್ತು ಬ್ರಹೂಇಯ ಅಧ್ಯಯನವನ್ನು ಕೈಗೆತ್ತಿಕೊಂಡಾಗ ನನಗೆ ಬ್ರಹೂಇ ಪದಗಳನ್ನು ಗುರುತಿಸುವುದೇ ಬಹಳ ತ್ರಾಸದಾಯಕ ಕೆಲಸವಾಗಿತ್ತು. ಸಾವಿರಾರು ವರ್ಷಗಳಿಂದ ದ್ರಾವಿಡ ಭಾಷಾ ಸಂಪರ್ಕದಿಂದ ದೂರವಿದ್ದ ಬ್ರಹೂಇಯಲ್ಲಿ ದ್ರಾವಿಡ ಪದಗಳು ಉಳಿದಿರುವುದು ಕೇವಲ ಹದಿನೈದು ಪ್ರತಿಶತವಷ್ಟೇ, ಉಳಿದಂತೆ ಭಾಷೆ ತನ್ನ ಸುತ್ತಮುತ್ತಲಿನ ಭಾಷೆಗಳ ಪ್ರಭಾವದಿಂದಾಗಿ ಎಲ್ಲವನ್ನೂ ಎರವಲು ಪಡೆದಂತೆ ಕಾಣುತ್ತಿತ್ತು. ಇದರ ಕಾರಣದಿಂದಾಗಿ ಅನೇಕ ವೀಡಿಯೋಗಳು, ಲೇಖನಗಳನ್ನು ಓದಿ ತುಳುವಿನೊಂದಿಗೆ ಸಮದೂಗಿಸಬಲ್ಲ ಕೆಲವು ಪದಗಳನ್ನು ಗುರುತಿಸಿದ್ದೇನೆ. ಅವುಗಳಲ್ಲಿ ಕೆಲವನ್ನು ಪಟ್ಟಿಮಾಡಿದ್ದೇನೆ.
ಬ್ರಹೂಇ(ಬ್ರ) - ತುಳು(ತು)
ಇರತ್ - ರಡ್ಡ್
ಮೂಸಿ - ಮೂಜಿ
ಕಣ್ಣ್ - ಕಣ್ಣ್
ತೇಲ್ - ತೇಲ್
ದಿತ್ತರ್ - ನೆತ್ತೆರ್
ಬಿಲ್ - ಬಿರು
ಬಾ - ಬಾಯಿ
ದೀರ್ - ನೀರ್
ಕಲ್ಲ್ - ಕಲ್ಲ್
ಕೊಟಿ - ಕೊಟ್ಯ
ಎಲೊ ದೆ - ಎಲ್ಲೆ ದಿನ
ಬಯಿ - ಬಯಿ
ಪರ್ರ್ - ಪಡೀರ್
ಕಾಕೋ - ಕಕ್ಕೆ
ಪೀ - ಪೀ
ಬಲ್ಲ - ಮಲ್ಲ
ಪನ್ - ಪನ್
ಏಯ್ - ಆಯೆ
ಅಹ್ನೊ - ಇನಿ
ಆತ್ - ಏತ್
ದೇರ್ - ಏರ್
ಬರ್ - ಬಲ
ಪಿಶಿ - ಪುಚ್ಚೆ
ಪಲ್ - ಪಾಂಪು
ಪುತರ್ - ಪಜಿರ್
ಪಲ್ - ಪಲಯಿ
ಕುರುಕ - ಕೊರೆಪು
ಪಾಲ್ - ಪೇರ್
ಇಂದಿನ ಬ್ರಹೂಇ ಭಾಷೆಯ ಸಂಖ್ಯೆಗಳನ್ನು ಗಮನಿಸಿದರೆ ಕೇವಲ ಇರತ್(೨) ಮತ್ತು ಮೂಸಿ(೩) ಅಷ್ಟೇ ದ್ರಾವಿಡ ಮೂಲದ ಪದಗಳು ಉಳಿದ ಎಲ್ಲಾ ಸಂಖ್ಯಾಸೂಚಕಗಳು ಇಂಡೋ-ಆರ್ಯನ್ ಭಾಷಾ ವರ್ಗಗಳಿಂದ ಎರವಲು ಪಡೆದಂತವುಗಳು. ಬ್ರಹೂಇ ಭಾಷೆಯ ಮೂಲಗಳು ಇನ್ನೂ ಅವರ ಜನಪದ ಹಾಡುಗಳಲ್ಲಿ ಉಳಿದುಕೊಂಡಿದ್ದು, ಆ ಹಾಡುಗಳು ತೆಲುಗು ಭಾಷೆಯನ್ನಾಡುವ ಪ್ರದೇಶಗಳ ಹಳ್ಳಿಗಳಲ್ಲಿ ಪ್ರಚಲಿತದಲ್ಲಿರುವ ಜನಪದ ಹಾಡುಗಳ ಧಾಟಿಯಂತಿವೆ. ಇನ್ನು ಪದಗಳ ವಾಕ್ಯರಚನೆಯ ಕುರಿತು ಸತತ ಅಧ್ಯಯನ ನಡೆಸಿದ ವಿದ್ವಾಂಸರು ಬ್ರಹೂಇ - ತಮಿಳಿಗಿರುವ ಹತ್ತಿರದ ಕೊಂಡಿಯನ್ನು ಗುರುತಿಸಿದ್ದಾರೆ.
ಒಳಮುಖ ವಲಸೆ ಮತ್ತು ಹೊರಮುಖ ವಲಸೆಯ ಪ್ರಕ್ರಿಯೆಗಳಿಗೆ ಅನೇಕ ಪ್ರಮೇಯಗಳಿದ್ದು ಇವುಗಳ ಕುರಿತು ಸತತ ಡಿಬೇಟ್ಗಳು ನಡೆದರೂ, ದ್ರಾವಿಡ ಭಾಷೆಯ ಕೊಂಡಿಯೊಂದು ಸಾವಿರಾರು ಮೈಲಿ ದೂರದಲ್ಲಿ ಹರಡಿಕೊಂಡಿರುವ ಕಾರಣವನ್ನು ಗುರುತಿಸಲು ಈ ಸಿದ್ಧಾಂತಗಳು ವಿಫಲವಾಗಿವೆ.
ಬ್ರಹೂಇ ದ್ರಾವಿಡ ನುಡಿಯಾಗಿರುವುದರಿಂದ ಇದಕ್ಕೆ ಇತರ ದ್ರಾವಿಡ ಭಾಷೆಗಳೊಂದಿಗೆ ಸಂಬಂಧವಿರುವುದು ಮತ್ತು ಶಬ್ಧಗಳಲ್ಲಿ ಹೋಲಿಕೆಯಿರುವುದು ಸಹಜ. ಆದರೆ ಇವೆಲ್ಲವುಗಳ ನಡುವೆ ನಮಗೆ ಕಂಡುಬರುವ ಇನ್ನೊಂದು ವಿಷಯವೇ ಬಲೂಚಿಸ್ಥಾನದಲ್ಲಿರುವ 'ಪಿರಾಕ್' ಎನ್ನುವ ಜಾಗ. ಪಿರಾಕ್ ಸಿಂಧು ನಾಗರಿಕತೆಯ ಕುರುಹು ಇರುವ ಜಾಗ ಮತ್ತು ಈ ಜಾಗವನ್ನು ಉತ್ಕನನ ನಡೆಸಿದ ಪುರಾತತ್ವ ತಜ್ಞರು ಕಬ್ಬಿಣದ ಬಳಕೆ ಮತ್ತು ಕುದುರೆಯನ್ನು ಬಳಸಿದ ಪುರಾತನ ಪಳಯುಳಿಕೆಗಳನ್ನೂ ಪತ್ತೆಹಚ್ಚಿದರು.ಪಿರಾಕ್ ಪ್ರದೇಶದ ಮೂಲ ಬೆಳೆ ಭತ್ತವಾಗಿತ್ತು. ತುಳುವಲ್ಲಿ 'ಪಿರಾಕ್' ಎಂಬ ಪದಕ್ಕೆ ಪುರಾತನ ಕಾಲದ ಎಂಬ ಅರ್ಥವಿದೆ. 'ಪಿರಾಕ್ ದ' ಎಂದರೆ ಹಿಂದಿನ/ಹಳೆಯ ಎಂದರ್ಥ. ಯಾರಿಗೆ ಗೊತ್ತು ದ್ರಾವಿಡ ಭಾಷೆಯನ್ನಾಡುವ ಜನಾಂಗವೇ ಒಮ್ಮೆ ಸಿಂಧೂ ಕಣಿವೆಯಲ್ಲಿ, ಪಿರಾಕ್ನಲ್ಲಿ ಬದುಕಿದ್ದಿರಬಹುದು ಅವರ ಕುರುಹೇ ಇಂದಿನ ಬ್ರಹೂಇಗಳಾಗಿರಬಹುದು. ತುಳುವರು 'ಪಿರಾಕ್ ಡ್ ಇಂಚ ಇತ್ತ್ ಜಿ' ಎಂದು ಹೇಳುವ ವಾಕ್ಯದ ಮೂಲ ಅರ್ಥವೇ ಬೇರೆಯಿರಬಹುದು. ಒಟ್ಟಿನಲ್ಲಿ ಎಲ್ಲವೂ ಸಾಧ್ಯ ಮತ್ತು ಅಸಾಧ್ಯ.
ತುಳು ಇನ್ನೂ ತನ್ನ ಒಡಳಾಲದಲ್ಲಿ ಅನೇಕ ಒಗಟುಗಳನ್ನು ಬಚ್ಚಿಟ್ಟುಕೊಂಡಿದೆ. ತುಳುವಿನ ಕುರಿತಾದ ಉದಾಸೀನ ಧೋರಣೆಯನ್ನು ಬಿಟ್ಟರೆ ಇನ್ನಷ್ಟು ಹೊಸ ವಿಷಯಗಳು ಮತ್ತು ಹೊಸ ಸಂಶೋಧನೆಗಳಿಗೆ ನಾಂದಿಯಾಗಬಹುದು. ತುಳು ಮತ್ತು ಬ್ರಹೂಇ ಸಂಬಂಧದ ಬಗ್ಗೆ ಅಗಾಧ ಸಂಶೋಧನೆಯ ಅಗತ್ಯತೆಯಿದೆ. ಈ ಸಂಶೋಧನೆಗಳು ನಡೆದರೆ ಮುಂದೆ ಕಾಲ ಚಕ್ರದಲ್ಲಿ ಉದುಗಿಹೋದ ಅವೆಷ್ಟೋ ಸೋಜಿಗಗಳು ಬೆಳಕಿಗೆ ಬರುವುದು ಖಚಿತ.
- ಮಹಿ ಮುಲ್ಕಿ